ABOUT US


ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಎಣ್ಮಕಜೆ ಪಂಚಾಯತು ವ್ಯಾಪ್ತಿಗೆ ಒಳಪಟ್ಟ ಶೇಣಿ ಗ್ರಾಮದ ಜನರ ವಿದ್ಯಾರ್ಜನೆಗಾಗಿ ಸ್ಥಾಪಿಸಲ್ಪಟ್ಟ ಶ್ರೀ ಶಾರದಾಂಬಾ ಎಲಿಮಂಟರಿ ಶಾಲೆಯು 1944ರಲ್ಲಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು.ಮುಂದೆ 1960ರಲ್ಲಿ ಯು.ಪಿ ಶಾಲೆಯಾಗಿ ಭಡ್ತಿಹೊಂದಿತು.ಆದರೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಸುಮಾರು 10 ಕಿ.ಮೀ ದೂರದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯನ್ನು ಅವಲಂಬಿಸಬೇಕಾಗಿತ್ತು.ಇದರಿಂದಾಗಿ ಹಲವರು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಗುತ್ತಿತ್ತು .
ಶೇಣಿ ತೋಟದಮನೆ ಲಿಂಗಣ್ಣ ನಾಯಕ್ ಮತ್ತು ಮಗ ಜನಾರ್ಧನ ನಾಯಕರ ಅವಿರತ ಪರಿಶ್ರಮದ ಫಲವಾಗಿ1976ರಲ್ಲಿ ಯು.ಪಿ ಶಾಲೆಯ ಸಮೀಪದಲ್ಲಿಯೇ ಶ್ರೀ ಶಾರದಾಂಬಾ ಪ್ರೌಢಶಾಲೆ ಸ್ಥಾಪನೆಯಾಯಿತು.ಶೇಣಿ ತೋಟದಮನೆ ಲಿಂಗಣ್ಣ ನಾಯಕ್ ಅವರು ವ್ಯವಸ್ಥಾಪಕರಾಗಿಯೂ ಶ್ರೀಮತಿ ಶಾರದಾ ವೈ ಅವರು ಮುಖ್ಯೋಪಾಧ್ಯಾಯರಾಗಿಯೂ ಆರಂಭಗೊಂಡ ಈ ಶಾಲೆಯ ಮೊದಲ ಬ್ಯಾಚಿನಲ್ಲಿ ಕೇವಲ 32 ಮಕ್ಕಳಿದ್ದರು. ಈ ಶಾಲೆಯು ಹಂತ ಹಂತವಾಗಿ ಅಭಿವೃದ್ಧಿಹೊಂದಿ 2012-2013ನೇ ಶೈಕ್ಷಣಿಕ ವರ್ಷದಲ್ಲಿ 8,9,10 ತರಗತಿಗಳಲ್ಲಾಗಿ 729 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ಲಿಂಗಣ್ಣ ನಾಯಕರ ಮರಣಾ ನಂತರ 1986ರಲ್ಲಿ ಶೇಣಿ ತೋಟದಮನೆ ಜನಾರ್ಧನ ನಾಯಕರು ವ್ಯವಸ್ಥಾಪಕರಾದರು.1989ರಲ್ಲಿ ಶ್ರೀಯುತರ ಮರಣಾ ನಂತರ ಶೇಣಿ ತೋಟದಮನೆ ಗೋವಿಂದ ನಾಯಕ್ ಅವರು ಶಾಲೆಯ ಆಡಳಿತದ ಚುಕ್ಕಾಣಿ ಹಿಡಿದರು.2006ರಲ್ಲಿ ಅವರು ವಿಧಿವಶರಾದ ಬಳಿಕ ಸೋಮಶೇಖರ ಜೆ.ಎಸ್ ಅವರು ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿರುವರು.
ಇಂದು ಈ ಶಾಲೆಯಲ್ಲಿ ಆಧುನಿಕ ಸೌಕರ್ಯಗನ್ನೊಳಗೊಂಡ ಸಯನ್ಸ್ ಲ್ಯಾಬ್,ಸುಸಜ್ಜಿತ ಲೈಬ್ರರಿ,ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳಿವೆ.ಪ್ರಾಥಮಿಕ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಇತ್ಯಾದಿಗಳನ್ನು ಇನ್ನೂ ಉತ್ತಮಪಡಿಸಲಾಗಿದೆ.ಶಾಲಾ ಮಕ್ಕಳ ಸೌಕರ್ಯಕ್ಕಾಗಿ ಬಸ್ ಸೌಕರ್ಯವನ್ನು ಏರ್ಪಡಿಸಲಾಗಿದೆಯಲ್ಲದೆ ಪ್ರಯಾಣಿಕರ ತಂಗುದಾಣವನ್ನೂ ನಿರ್ಮಿಸಲಾಗಿದೆ.
ಶಾಲೆಯು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು 1985, 2004 ಹಾಗು 2008ರಲ್ಲಿ
ಉಪಜಿಲ್ಲಾ ಶಾಲಾ ಕಲೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿದೆ.ನಮ್ಮ ಶಾಲೆ ಕಳೆದ ವರ್ಷ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ ಈ ವರ್ಷ ವಿಜ್ಞಾನ ಮೇಳ ಹಾಗು ವೃತ್ತಿ ಪರಿಚಯ ಮೇಳಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ಶಾಲೆಗೆ ಶಾಲಾ ಶಿಕ್ಷಕ,ರಕ್ಷಕ ಸಂಘದಿಂದಲೂ, ಹಳೆಯ ವಿದ್ಯಾರ್ಥಿಗಳಿಂದಲೂ ಉತ್ತಮ ಸಹಕಾರ ಲಭಿಸತ್ತಿದೆ.ಇಲ್ಲಿ ವಿದ್ಯಾರ್ಜನೆ ಮಾಡಿದ ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದು ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿದ್ದಾರೆ.

No comments: