Sunday 6 July 2014

ನಾನೇಕೆ ಶಾಲೆಗೆ ಹೋಗಬೇಕು


           ರೂಪ ಯೌವನದಿಂದ ಕೂಡಿದ್ದರೂ ಉತ್ತಮ ಕುಲದಲ್ಲಿ ಹುಟ್ಟಿದರೂ ವಿದ್ಯೆ  ಇಲ್ಲದವನ ಬಾಳು ವಾಸನೆ ಇಲ್ಲದ ಮುತ್ತುಗದ ಹೂವಿನಂತೆ ಶೋಭಿಸುವುದಿಲ್ಲ.ಮಾನವ ಮಾನವನಾಗಿ ಬಾಳಬೇಕಾದರೆ  ವಿದ್ಯೆ ಬೇಕು.ವಿದ್ಯೆಯಿಲ್ಲದವ ಪಶುವಿಗೆ ಸಮಾನ.ವಿದ್ಯೆಯುಳ್ಳವನ ಮುಖದಲ್ಲಿ ಕಳೆಯಿರುತ್ತದೆ.ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತೆ ಎಂದು ಸರ್ವಜ್ಞ ಕವಿ ಹೇಳಿದ್ದಾನೆ.ಅಂತೆಯೇ ವಿದ್ಯೆ ಕಲಿತು ಮಾನವನಾಗುವುದಕ್ಕಾಗಿ ನಾನು ಶಾಲೆಗೆ ಹೋಗಬೇಕು.
           ವಿದ್ಯೆಗೆ ಶಿಕ್ಷಣ,ಬರವಣಿಗೆ ಎಂಬ ಪರ್ಯಾಯ ಪದಗಳೂ ಇವೆ.ಬರವಣಿಗೆ ಸುಲಭವಾಗಿ ಬರುವಂತಹುದು ಅಲ್ಲ.ಶಿಕ್ಷೆಯಿಂದ ಶಿಕ್ಷಣ ಬರುವುದಿಲ್ಲ.ಆಸಕ್ತಿ ಮತ್ತು ಪ್ರಯತ್ನದಿಂದ ವಿದ್ಯೆಯನ್ನು ಗಳಿಸಬೇಕು.ಇಂತಹ ಮಹತ್ವ ಪೂರ್ಣವಾದ ವಿದ್ಯೆಯನ್ನು ಕೊಡುವ ತಾಣವೇ ಶಾಲೆ.ಶಾಲೆಯನ್ನು ಸರಸ್ವತಿ ಮಂದಿರವೆಂದು ತಿಳಿಯುತ್ತಾರೆ.ನಮ್ಮ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಕೊಡುವ ಶಾಲೆಯಲ್ಲಿ ಕಳೆಯುವ ನಮ್ಮ ಬದುಕು ಅರ್ಥಪೂರ್ಣ.
           ಶಾಲೆ ಎಂಬುದು ಸಮಾಜವಿದ್ದಂತೆ.ದೊಡ್ಡವರಾದ ಮೇಲೆ ನಾವು ಸಮಾಜದಲ್ಲಿ ಬದುಕನ್ನು ಸಾಗಿಸಬೇಕಾಗುತ್ತದೆ.ವಿದ್ಯೆ ಕಲಿಯಲು ಅವಕಾಶ ಕೊಡುವುದು ಹೆತ್ತವರ ಹೊಣೆಯಾಗಿರುತ್ತದೆ.ಶಾಲೆಯಲ್ಲಿ ವಿದ್ಯಾರ್ಥಿಗೆ  ಜ್ಞಾನವನ್ನು ಸಂಪಾದಿಸುವಂತೆ ಮಾರ್ಗದರ್ಶನವನ್ನು ಮಾಡುವುದು ಗುರುವಿನ ಕರ್ತವ್ಯ.ಶಾಲೆ ಶಿಕ್ಷಣವನ್ನು ಕೊಡಿಸುವುದಕ್ಕಾಗಿ ರೂಪಿತವಾದ ಅಂಗ ಸಂಸ್ಥೆ.ಶಾಲೆಯಲ್ಲಿ ಮಾತ್ರ ಚೆನ್ನಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯ.ಗುರುವನ್ನು ದೇವರನ್ನಾಗಿ ಕಾಣುವುದು ನಮ್ಮ ಸಂಸ್ಕೃತಿ.
           ಜಗತ್ತಿನ ಉದಯದ ಆದಿಯಲ್ಲಿ ಮಾನವ ಅನಾಗರಿಕನಾಗಿದ್ದನು.ಮುಂದೆ ವಿದ್ಯೆಯಿಂದ ಸುಸಂಸ್ಕೃತನಾಗಿ ನಾಗರಿಕನಾಗಿ ಬೆಳೆದು ಬಂದನು.ಜಗತ್ತು ವಿಶಾಲವಾಗಿದೆ.ಜಗತ್ತಿನ ಅನುಭವಗಳನ್ನು ಜ್ಞಾನಬೇಕು,ಜ್ಞಾನಕ್ಕೆ ವಿದ್ಯೆಯೇ ಮೂಲ.ಅದರೊಂದಿಗೆ ಉತ್ತಮವಾದ ಉದ್ಯೋಗ ದೊರಕಿಸಿಕೊಳ್ಳಲು ಶಿಕ್ಷಣವೇ ಬೇಕು.
           ಒಟ್ಟಿನಲ್ಲಿ ಪರಿಪೂರ್ಣ ಮಾನವನಾಗಿ ನನ್ನ ಉದ್ದಾರ ಮಾಡಿಕೊಳ್ಳುವುದಕ್ಕಾಗಿ ಶಾಲೆಗೆ ಹೋಗಬೇಕು.ನಾನು ದೇಶಕ್ಕೆ ಹೊರೆಯಾಗಬಾರದು,ಬಾಳು ಬರಡಾಗಬಾರದು. ಮಾನವ ಬದುಕನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕಾಗಿ ನಾನು ಶಾಲೆಗೆ ಹೋಗಬೇಕು ಹಾಗೂ ವಿದ್ಯೆ ಕಲಿಯಬೇಕು.

                                                                                    ಕಿರಣ್ ಬೋರ್ಕರ್
                                                                                     10 ಬಿ ತರಗತಿ

No comments: