Saturday, 2 August 2014

                            ಗಾದೆಗಳು

          ಗಾದೆ ಎಂದರೆ ಲೋಕೋಕ್ತಿ, ಅನುಭವದ ಮಾತು, ಹೀಗಾಗಿ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ನುಡಿದಿರುವರು.ತಲೆಮಾರಿನಿಂದ ತಲೆಮಾರಿಗೆ ಪರಂಪರಾಗತವಾಗಿ ಹರಿದು ಬಂದಿರುವ ಸಾಂದ್ರವೂ ಬೋಧಪರವೂ ಆದ ಸೂಕ್ತಿಯೇ ಗಾದೆ (ಪ್ರಾವರ್ಬ್). ಕನ್ನಡದಲ್ಲಿ ಗಾದೆ ಪದಕ್ಕೆ ಸಂವಾದಿಯಾಗಿ ನಾಣ್ಣುಡಿ ಎಂಬ ಪದವೂ ಪ್ರಚಲಿತವಿದೆ. ಗಾದೆ ಸಂಸ್ಕೃತದ ಗಾಥಾ ಪದದಿಂದ ಬಂದಿದ್ದೆಂದು ಹೇಳುತ್ತಾರೆ. ಇದು ಗಾಥಾ ಪದದ ನೇರ ತದ್ಭವವೊ ಅಥವಾ ಪ್ರಾಕೃತದ ಗಾಹೆಯ ಮೂಲಕ ಬಂದುದೊ ಹೇಳಲು ಇಷ್ಟ. ಆದರೆ ಗಾಥಾ ಎಂಬುದು ಮೂಲದಲ್ಲಿ ಒಂದು ಛಂದಸ್ಸಿನ ಜಾತಿಯನ್ನು ಸೂಚಿಸುತ್ತದೆಯೆಂದು ಮಾತ್ರ ಹೇಳಬಹುದು. ಅಂತು “ನಾಣ್ಣುಡಿ”ಯನ್ನು ಮರೆಸುವಷ್ಟರಮಟ್ಟಿಗೆ “ಗಾದೆ” ಪ್ರಚಾರದಲ್ಲಿದೆ. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಉದ್ಧರಣೆ, ಲೋಕೋಕ್ತಿ, ಪ್ರಾಚೀನೋಕ್ತಿ ಇತ್ಯಾದಿಗಳು ಬಳಕೆಯಾಗಿದ್ದರೂ ಮೂಲಾರ್ಥದಲ್ಲಿ ಇವೆಲ್ಲವೂ ಒಂದೇ ಎನ್ನಲಾಗುವುದಿಲ್ಲ.
ಜನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗಿಂತ ಗಾದೆ ವ್ಯಾಪಕವೂ ಜನ ಸಂಮುಖವೂ ಆಗಿದೆಯಲ್ಲದೆ, ಜನಸಾಮಾನ್ಯರ ಬದುಕು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆ. ಗ್ರಾಮೀಣ ಜನ ಮಾತನಾಡುವಾಗಲೆಲ್ಲ ಗಾದೆಗಳು ಪುಂಖಾನು ಪುಂಖವಾಗಿ ಬರುವುದನ್ನು ಕಾಣುತ್ತೇವೆ. ಅವಿಲ್ಲದೆ ಹೋದರೆ ಮಾತು ಸಪ್ಪೆಯಾಗುತ್ತದೆ. ಲಾದ್ದರಿಂದಲೆ ಸಮಯಕ್ಕೆ ಸರಿಯಾಗಿ ಗಾದೆ ಬಾರದೆ ಹೋದರೆ, ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು ಎಂದು ಹೇಳುವುದರ ಮೂಲಕ ಅದರ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಗಾದೆ ಆಡುಮಾತಿನ ಜೀವಸತ್ತ್ವ ಎಂಬುದನ್ನು ಇದು ತೋರಿಸಿಕೊಡುತ್ತದೆ. ಊಟಕ್ಕೆ ಉಪ್ಪಿನಕಾಯಿಯಂತೆ ಗಾದೆ ಮಾತಿಗೆ ವ್ಯಂಜನಶಕ್ತಿಯನ್ನು ಒದಗಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯೇ ಗಾದೆಯ ಸ್ವರೂಪವನ್ನು ತಿಳಿಸುತ್ತದೆ. ಇದು ಆಕಾರದಲ್ಲಿ ವಾಮನವಾಗಿ ಅರ್ಥದಲ್ಲಿ ತ್ರಿವಿಕ್ರಮವೆನಿಸಿದೆ.
ಕೆಲವೊಂದು ಜನಪ್ರಿಯ ಗಾದೆಗಳು.
 ಇಬ್ಬರ ಜಗಳ ಮೂರನೆಯವನಿಗೆ ಲಾಭ :ಇಬ್ಬರು ಯಾವುದೇ ಒಂದು ವಿಷಯದಲ್ಲಿ ಒಮ್ಮತ ಹೊಂದದೆ, ಜಗಳವಾಡುತ್ತಿದ್ದರೆ ಆ ಸಂದರ್ಭವನ್ನು ಉಪಯೋಗಿಸಿಕೊಂಡು ಮೂರನೆಯವರು ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ. ಇದಕ್ಕೆ ಎರಡು ಕೋತಿ ಮತ್ತು ಒಂದು ಬೆಕ್ಕುವಿನ ಕತೆಯನ್ನು ಸಾಮಾನ್ಯವಾಗಿ ಉದಹರಣೆ ಕೊಡುತ್ತಾರೆ.
 ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕೆ? :ಅಂಗೈನಲ್ಲಿ ಇರೋ ಹುಣ್ಣನ್ನು ನೋಡಲು ಕನ್ನಡಿ ಬೇಕಾಗಿಲ್ಲ, ಹಾಗೆ ನೋಡಿದರಾಯಿತು. ಅದರಂತೆ ಕಣ್ಣೆದುರಿಗೆ ಕಾಣುತ್ತಿರುವ ಸನ್ನಿವೇಶವನ್ನು, ಬಹಳ ಸ್ಪಷ್ಟವಾಗಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ಬೇರೆ ಯಾವ ವಿಶೇಷವಾದ ಮಾರ್ಗವನ್ನು, ಅಥವ ಬೇರೆಯವರ ಹೇಳಿಕೆಗಳನ್ನು ನಿರೀಕ್ಷಿಸಬೇಕಾಗಿಲ್ಲ.ಅದರಷ್ಟಕ್ಕೆ ಅದೇ ಸ್ಪಷ್ಟವಾಗುತ್ತದೆ.
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು :ಮುತ್ತು ಕೆಳಗೆ ಬಿದ್ದು ಒಡೆದು ಹೋದರೆ ಮತ್ತೆ ಜೋಡಿಸಲು ಬರುವುದಿಲ್ಲ, ಹಾಗೆಯೇ ಮಾತು ಆಡಿದ ಮೇಲೆ ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.ಆದ್ದರಿಂದ ಮಾತು ಆಡುವುದಕ್ಕೆ ಮುಂಚೆ ಅದರ ಪರಿಣಾಮ, ಪ್ರಭಾವಗಳನ್ನು ಆಲೋಚಿಸಿ ನಂತರ ಮಾತನಾಡಬೇಕು.ಆಡಿದಮೇಲೆ ಯೋಚಿಸಲು ಸಮಯವಿರುವುದಿಲ್ಲ, ಪರಿತಾಪ ಪಟ್ಟರೂ ಪ್ರಯೋಜನವಿಲ್ಲ.
ಕೂತು ಉಂಡವನಿಗೆ ಕುಡಿಕೆ ಹಣ ಸಾಲದು :ಕೆಲಸ ಮಾಡದೆ ಸೋಮಾರಿಯಾಗಿ ಜೀವನ ನಡೆಸುವವರಿಗೆ ಈ ಗಾದೆ.ಕೂಡಿಟ್ಟ ಹಣ ಖರ್ಚು ಮಾಡುತ್ತಿದ್ದ ಹಾಗೆ ಮುಗಿಯುತ್ತ ಮ್ಬುಹೋಗುತ್ತದೆಯೇ ಹೊರತು ಹೆಚ್ಚ್ವುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಇರುವ ಹಣವನ್ನು ರೂಢಿಸಿಕೊಂಡರೆ ಅದು ಬೆಳೆಯುತ್ತ ಹೋಗುತ್ತದೆ.ಅದು ಬಿಟ್ಟು ಇರುವ ಹಣವನ್ನು ಮುಗಿಸುತ್ತ ಹೋದರೆ ಒಂದಲ್ಲ ಒಂದು ದಿನ ಅದು ಮುಗಿದು ಬದುಕುವ ದಾರಿ ಇಲ್ಲದೆ ಹೋಗುತ್ತದೆ, ಅಷ್ಟೇ ಅಲ್ಲ ಕೆಲಸ ಮಾಡದೆ ಸೋಮಾರಿಯಾಗಿ ಕಾಲ ಕಳೆಯುವ ಅಭ್ಯಾಸ ಮಾಡಿಕೊಂಡ ಮೇಲೆ ಕೆಲಸ ಮಾಡುವುದೂ ಸಾಧ್ಯವಾಗದೆ ಜೀವನ ನರಕವಾಗುತ್ತದೆ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು :ಎಷ್ಟೋಬಾರಿ ಕಣ್ಣೆದುರಿಗೆ ಕಾಣಿಸುತ್ತಿರುವುದು ನಿಜವಾಗಿರಲಾರದು. ಕಣ್ಣಿಗೆ ಕಾಣುವುದು ಒಂದು, ವಾಸ್ತವತೆಯೇ ಒಂದು ಆಗಿರುತ್ತದೆ.ಆದ್ದರಿಂದ ಕಣ್ಣೆದುರಿಗೆ ಕಾಣಿಸುತ್ತಿದ್ದರೂ ಅದನ್ನು ನಂಬಬೇಕಾದರೆ ಅದನ್ನು ಒರೆಗೆ ಹಚ್ಚಿ ನೋಡಿ ನಂತರ ನಂಬಬೇಕು. ಇಲ್ಲದಿದ್ದರೆ...
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ :ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ಸನ್ನಿವೇಶದ ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು. ಹಾಗೇ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಇರುವವರು, ನಮ್ಮ ನೆಂಟರಿಷ್ಟರು ಹಸನ್ಮುಖರಾಗಿ ಇರುವುದನ್ನು ನೋಡಿ ಅವರಿಗೆ ಯಾವುದೇ ಕಷ್ಟ್ಗಗಳಿಲ್ಲ, ಬರಿ ಸುಖ ಸಂತೋಷಗಳೆ ಎಂದು ಯೋಚಿಸುವುದು ಸರಿಯಲ್ಲ. ಏಕೆಂದರೆ ಅವರಿಗಿರುವ ಕಷ್ಟ ನಮಗೆ ಗೊತ್ತಿರುವುದಿಲ್ಲ.ಆದ್ದರಿಂದ ತನಗೆ ಬಂದ ಕಷ್ಟಗಲನ್ನು ನಗುನಗುತ್ತ ಎದುರಿಸಬೇಕು, ಪ್ರಪಂಚದಲ್ಲಿ ಎಲ್ಲರಿಗು ಕಷ್ಟಬರುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು.ಅದು ಬಿಟ್ಟು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆ
ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಗಾದೆಯಿದೆ- ’ಎಲ್ಲರ ಮನೆಯ ದೋಸೆಯೂ ತೂತೆ’ಯಾರ ಮನೆಯಲ್ಲಿ ದೋಸೆ ಹುಯ್ದರೂ ತೂತು ಇದ್ದೇ ಇರುತ್ತದೆ. ಈ ಮಾತು ನೆನಪಿನಲ್ಲಿ ಇಟ್ಟೂಕೊಂಡರೆ ಜೀವನ ಹಗುರವಾಗುತ್ತದೆ. ಅದುಬಿಟ್ಟು ನನ್ನ ಮನೆಯಲ್ಲಿ ಮಾತ್ರ ಕಷ್ಟ ಬಂದಿದೆ ಎಂದು ಚಿಂತೆ ಮಾಡುತ್ತ ಕುಳಿತಿರುವುದು ತಪ್ಪು.ಕಾವಲಿಯಲ್ಲೇ ತೂತುಬೀಳದಂತೆ ನೋಡಿಕೊಳ್ಳಬೇಕು.
ಎತ್ತ್ತು ಏರಿಗೆಳೆಯಿತು ಕೋಣ ನೀರಿಗೆಳೆಯಿತು:ಸಂಸಾರದಲ್ಲಿ ಗಂಡ ಹೆಂಡತಿ ಇಬ್ಬರೂ ನೊಗಕ್ಕೆ ಕಟ್ಟಿದ ಎರಡು ಎತ್ತುಗಳು ಇದ್ದ ಹಾಗೆ. ಎರಡು ಎತ್ತುಗಳು ಒಂದೇ ಕಡೆಗೆ ಎಳೆದಾಗಲೇ ಸಂಸಾರ ಸುಗಮವಾಗಿ ಸಾಗುವುದು. ಇದನ್ನು ಹೇಳುವುದಕ್ಕೆ ಈ ಗಾದೆಯನ್ನು ಹೇಳಿದ್ದಾರೆ. ಆದರೆ ಈ ಗಾದೆಯನ್ನು ಎರಡು ಅಭಿಪ್ರಾಯಗಳು ಹೊಂದಾಣಿಕೆಯಾಗದೆ ಇರುವ ಸಂದರ್ಭದಲ್ಲಿ ಬಳಸಬಹುದು. ಅದು ಗಂಡ ಹೆಂಡತಿಯೇ ಆಗಬೇಕಿಲ್ಲ, ಅಪ್ಪ ಮಗ ಆಗಿರಬಹುದು, ಒಂದು ಸಂಸ್ಥೆಯ ನಿರ್ವಹಣೆಯಲ್ಲಾಗಲಿ ಆಗಿರಬಹುದು, ಒಮ್ಮತದ ಅಭಿಪ್ರಾಯ ಇದ್ದರೇ ಕೆಲಸ ಸುಗಮವಾಗಿ ಸಾಗುತ್ತದೆ.
ಹಾಡ್ತ ಹಾಡ್ತ ರಾಗ ;ನರಳ್ತ ನರಳ್ತ ರೋಗ :ಯಾವುದೇ ಕೆಲಸವನ್ನು ನನಗೆ ಬರುವುದಿಲ್ಲ ಎಂದು ಬಿಡಬಾರದು, ಮೊದಲನೇ ಬಾರಿಗೆಯೆ ಕೈಕೊಂಡ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ, ಆ ಕೆಲಸ ನನಗೆ ಮಾಡಲು ಬರುವುದೇ ಇಲ್ಲ ಎಂಬ ಅರ್ಥವಲ್ಲ.ಹಾಡು ಮೊದಲನೆ ಸಾರಿಗೆ ಶ್ರುತಿಶುದ್ಧವಾಗಿ , ತಾಳಪೂರ್ಣವಾಗಿ ಬರದೇ ಇರಬಹುದು,ಆದರೆ ಹಾಡ್ತ,ಹಾಡ್ತ, ಅಭ್ಯಾಸ ಮಾಡ್ತ,ಮಾಡ್ತ ಕ್ರಮೇಣ ಸರಿಯಾಗುತ್ತದೆ, ಅದರಂತೆಯೇ ತನಗೆ ಯಾವುದೇ ರೋಗವಿಲ್ಲದಿದ್ದರೂ ,ದಿನ ಬೆಳಗಾದರೆ ಒಂದಲ್ಲ ಒಂದ್ ನೋವು, ರೋಗ ಇದೆ ಎಂದು ಕೊಳ್ಳುತ್ತ ಹೋದರೆ ನಿಜವಾಗಿಯೂ ಖಾಹಿಲೆ ಉಂಟಾಗುತ್ತದೆ. ಏಕೆಂದರೆ ಮನಸ್ಸಿನ ನಿಶ್ಚಲತೆಯೆ ಇದಕ್ಕೆ ಕಾರಣವಾಗಿರುತ್ತದೆ.
ಬಡವರ ಮನೆ ಊಟ ಚೆಂದ ;ಸವ್ಕ್ರಾರ್ರ ಮನೆ ನೋಟ ಚೆಂದ:ಸಿರಿವಂತರಿಗೆ ತಮ್ಮಲ್ಲಿರುವ‘ಐಶ್ವರ್ಯವನ್ನು ತೋರಿಸುವ ಆತುರ ಹೆಚ್ಚಾಗಿರುತ್ತದೆ. ಆದರಿಂದ ಅವರ ಗಮನವೆಲ್ಲ ತಮ್ಮಲ್ಲಿರುವ ಸಂಪತ್ತನ್ನು ಯಾವ ರೀತಿ ಪ್ರದರ್ಶಿಸುವುದು ಎಂಬುದರ ಮೇಲಿರುತ್ತದೆ. ಹಾಗಾಗಿ ಬಂದವರಿಗೆ ಊಟ ಉಪಚಾರಗಳನ್ನು ನಡೆಸುವುದು ಗೌಣವಾಗುತ್ತದೆ. ಆದರೆ ಬಡವರ ಮನೆಯಲ್ಲಿ ಮನೆಗೆ ಬಂದವರನ್ನು ಸಂತೋಷಗೊಳಿಸುವುದೇ ಮುಖ್ಯವಾಗಿರುತ್ತದೆ.ಅವರಿಗೆ ಇಲ್ಲದ‘ಆಡಂಬರ ’ಮಾಡಲು ಅವಕಾಶವೂ ಇಲ್ಲ,ಸಾಧ್ಯವೂ ಇಲ್ಲ.ಹಗಾಗಿ ಬಂದವರಿಗೆ ಊಟ ಉಪಚಾರಗಳು ಸೊಗಸಾಗಿ ನಡೆಯುತ್ತವೆ.
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು:ಸಾಮಾನ್ಯವಾಗಿ ಮನೆ ಕಟ್ಟುವ ಖರ್ಚು, ಮದುವೆ ಮಾಡುವ ಖರ್ಚು ಇವುಗಳನ್ನು ಎಷ್ಟೇ ಮುತುವರ್ಜಿಯಿಂದ ಲೆಕ್ಕ ಹಾಕಿದ್ದರೂ ಮನೆಯನ್ನು ಕಟ್ಟ ಹೊರಟಮೇಲೇ ನಮಗೆ ಅದಿದ್ದರೆ ಚೆನ್ನ, ಇದು ಹೀಗಿದ್ದರೆ ವಾಸಿ, ಕೊಂಚ ಹಣ ಹೆಚ್ಚಾದರೇನಂತೆ ಹೀಗೆ ಮಾಡಿಬಿಡೋಣ ಎಂದು ಒಂದೊಂದೇ ಸೇರಿಸಿಕೊಂಡು ಹೋಗುತ್ತೇವೆ. ಹಾಗಾಗಿ ವೆಚ್ಚ ಹೆಚ್ಚಾಗುತ್ತ ಹೋಗುತ್ತದೆ. ಹಾಗೆಯೇ ಮದುವೆ ಮಾಡುವಾಗಲೂ ,ಕೊಡಬೇಕಾದ ಸಂದರ್ಭದಲ್ಲಿ, ಅಡಿಗೆಯ ಸಂದರ್ಭದಲ್ಲಿ ಆದರೇನು ಇರಲಿ ಬಿಡಿ ಅನ್ನುತ್ತ ಹೋಗುತ್ತೇವೆ. ಅದರಿಂದ ಖರ್ಚು ಬೆಳೆಯುತ್ತದೆ. ಮದುವೆ ಮಾಡಿದ ಮೇಲೆ ಖರ್ಚು ಎಷ್ಟಾಯಿತು ಎ೦ಬುದು ತಿಳಿಯುವುದು.ಹಾಗೆಯೇ ಮನೆ ಕಟ್ಟುವ ವಿಚಾರವೂ ಕೂಡ.


2 comments:

Anonymous said...

Nice

Anonymous said...

ಇಬ್ಬರ ಜಗಳ ಮೂರನೆಯವನಿಗೆ ಲಾಭ' ಈ ಮೇಲಿನ ಗಾದೆಯ ಮಾತನ್ನು ವಿಸ್ತರಿಸಿ, ಒಂದು ಕತೆಯನ್ನು ಬರೆಯಿರಿ :