Saturday, 3 January 2015

ಚಂದ್ರನ ಮೇಲೆ ಮೂಲಂಗಿ ಬೆಳೆಯುತ್ತಾರಂತೆ !

ಭೂ ಗ್ರಹದ ಉಪಗ್ರಹ ಚಂದ್ರನಲ್ಲಿ 2015ರ ಅವಧಿಯೊಳಗೆ ಮೂಲಂಗಿ ಇನ್ನಿತರ ತರಕಾರಿಗಳು, ತುಳಸಿ ಜಾತಿ ಸಸ್ಯಗಳನ್ನು ಬೆಳೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಯೋಜನೆಯೊಂದನ್ನು ರೂಪಿಸಿದೆ.ಭೂಮಿಯ ಸ್ವಾಭಾವಿಕ ಉಪಗ್ರಹವಾಗಿರುವ ಚಂದ್ರನ ಮೇಲೆ ಮಾನವ ಜೀವಿಗಳು ಬದುಕಲು ಸಾಧ್ಯವೇ ಎಂಬುದನ್ನು ಅರಿತುಕೊಳ್ಳಲು ತರಕಾರಿ ಬೆಳೆಯುವ ಈ ವಿನೂತನ ಯೋಜನೆಯನ್ನು ನಾಸಾ ಹಮ್ಮಿಕೊಂಡಿದೆ.ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರನ ಸಮತಲದ ಮೇಲೆ ಇರಿಸಲಾಗುವ ಗಗನನೌಕೆಯೊಂದರಲ್ಲಿ ಮುಂದಿನ ಎರಡು ವರ್ಷಗಳ ಅವಧಿಯೊಳಗೆ ಸಸ್ಯಗಳನ್ನು ನಾಟಿ ಮಾಡಲಿದೆ ಎಂದು ‘ನಾಸಾ' ಹೇಳಿದೆ.‘ಲೂನಾರ್ ಪ್ಲಾಂಟ್ ಗ್ರೋತ್ ಹ್ಯಾಬಿಟ್ಯಾಟ್' ತಂಡವು ಈ ಯೋಜನೆಯನ್ನು ರೂಪಿಸಿದೆ. ತರಕಾರಿ ಬೆಳೆಯುವ ಸಂದರ್ಭದಲ್ಲಿ ಚಂದ್ರನ ವಾತಾವರಣದ ಕಠಿಣ ಧಾತುಗಳ ವಿರುದ್ಧ ಸಸ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಸಲಾಗಿರುವ ಕಾಫಿ ಡಬ್ಬ ಗಾತ್ರದ ಪಾತ್ರೆಗಳನ್ನು ಬಳಸುವ ಉದ್ದೇಶವನ್ನು ತಂಡ ಹೊಂದಿದೆ.

ಮಾತ್ರವಲ್ಲದೆ, ಸಸ್ಯಗಳು ಚಂದ್ರನ ಮೇಲೆ ಬೆಳೆಯುವ ರೀತಿಯ ಬಗ್ಗೆ ಭೂಮಿಗೆ ಮಾಹಿತಿಯನ್ನು ರವಾನಿಸಲು ಅನುಕೂಲವಾಗುವಂತೆ ಕ್ಯಾಮರಾಗಳು, ಸಂವೇದಕಗಳು ಹಾಗೂ ವಿದ್ಯುನ್ಮಾನ ಉಪಕರಣಗಳನ್ನೂ ಅಳವಡಿಸಲಾಗುವುದು ಎಂದು ನಾಸಾ ವಿವರಿಸಿದೆ.
ಚಂದ್ರನಲ್ಲಿಗೆ ಗಗನ ನೌಕೆಗಳನ್ನು ಇಳಿಸಿದ ಬಳಿಕ ಅಲ್ಲಿ ಬೀಜಗಳಿಗೆ ನೀರು ಒದಗಿಸಲಾಗುವುದು ಮತ್ತು ಅವುಗಳು ಮೊಳಕೆಯೊಡೆದು ಬೆಳವಣಿಗೆ ಹೊಂದಲು ಬೇಕಾದಂತೆ ನೀರು ಒದಗಿಸಲು ಸೂಕ್ತ ಸರೋವರವನ್ನೂ ನಿರ್ಮಿಸಲಾಗುವುದು ಎಂದು ಯೋಜನಾ ತಂಡದ ತಜ್ಞರು ತಿಳಿಸಿದ್ದಾರೆ.
ಚಂದ್ರನಲ್ಲಿ ಸಸ್ಯಗಳ ಬೆಳವಣಿಗೆ ಕುರಿತ ಮಾಹಿತಿಯು ಮಾನವರೂ ಚಂದ್ರನ ಮೇಲೆ ಜೀವನ ಸಾಗಿಸಬಹುದೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ನಾಸಾಕ್ಕೆ ನೆರವಾಗಲಿದೆ ಎಂದು ಭಾವಿಸಲಾಗಿದೆ.
ಗಗನಯಾತ್ರಿಗಳಿಗೆ ಆಹಾರ ಹಾಗೂ ಆಮ್ಲಜನಕ ಪೂರೈಕೆಗಾಗಿ ಚಂದ್ರ ಅಥವಾ ಮಂಗಳಗ್ರಹದ ನೆಲೆಗಳಲ್ಲಿ ತಾಜಾ ತರಕಾರಿಗಳನ್ನು ಬೆಳೆಸುವ ಯೋಜನೆಯೊಂದನ್ನು ಕಳೆದ ವರ್ಷ ಚೀನಾದ ವಿಜ್ಞಾನಿಗಳು ಪ್ರಕಟಿಸಿದ್ದರು.

No comments: