ಹುಟ್ಟು ಸಾವು ನಡುವಿನ ಸಾರ್ಥಕ ಬಾಳು
ಹುಟ್ಟು
ನಮ್ಮ ಕೈಯಲಿಲ್ಲ, ಹಾಗೇ ಸಾವೂ ಕೂಡ (ಆತ್ಮಹತ್ಯೆಗಳನ್ನು ಹೊರತುಪಡಿಸಿ). ಆದರೆ ಇವರೆಡರ
ನಡುವಿನ ಬದುಕು ನಮ್ಮ ಕ್ಯೆಯಲ್ಲೇ ಇದೆ, ಇದನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳುವ
ಅವಕಾಶ ನಮಗಿದೆ.ಒಂದು ಮಗುವಿನ ಹುಟ್ಟಿನೊಂದಿಗೆ ಅನೇಕ ಆಸೆ ಕನಸುಗಳೂ ಹುಟ್ಟಿಕೊಳ್ಳುತ್ತವೆ.
ಬದುಕಿನುದ್ದಕ್ಕೂ ಅವುಗಳನ್ನು ಪೂರೈಸಿಕೊಳ್ಳಲು ವ್ಯಕ್ತಿ ಹೆಣಗುತ್ತಾನೆ, ಹಾಗೆ
ಸಫಲವಾಗುವುದು ಕೆಲವೇ ಕೆಲವು. ಇನ್ನುಳಿದವು ವ್ಯಕ್ತಿಯ ಸಾವಿನೊಂದಿಗೆ ಸಾಯುತ್ತವೆ.
ವ್ಯಕ್ತಿ ಸಫಲಗೊಳಿಸಿಕೊಂಡ ಆಸೆ ಕನಸುಗಳಿಂದಲೇ ನಾವು ಅವನನ್ನು ನಾವು ಅಳೆಯುತ್ತೇವೆ. ಅವನ
ಸಾಕಾರಗೊಳ್ಳದ ವ್ಯಕ್ತಿತ್ವಗಳಿಂದ ಅವನನ್ನು ನಾವು ಅಳೆಯುವುದಿಲ್ಲ, ಅಲ್ವೆ?ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ವ್ಯಕ್ತಿ ತೀರಿಕೊಂಡ ಮೇಲೆ ಆತ ಉಳಿಸಿ ಹೋದ,
ಬೆಳೆಸಿಕೊಂಡ ವ್ಯಕ್ತಿತ್ವದ ಆಧಾರದ ಮೇಲೆ ಆತನ ಗುಣವನ್ನು ಅಳೆಯುತ್ತಾರೆ. ಸಮಾಜ ಸೇವೆ,
ಬುದ್ಧಿವಂತಿಕೆ, ಒಳ್ಳೆಯತನಗಳಿಂದ ವ್ಯಕ್ತಿಯನ್ನು ತೂಗುತ್ತೇವೆ. ಜೀವನದಲ್ಲಿ ಮಾಡಿದ
ಸಾಧನೆಯೇ ಆಸ್ತಿ ಅಂತಸ್ತು.
ಒಬ್ಬ ವ್ಯಕ್ತಿ ಸತ್ತಾಗ, ಆತ ಮಾಡಿದ ಸಾಧನೆಗಳೆಲ್ಲ ಚರ್ಚೆಗೆ ಬರುತ್ತವೆ. ಇಷ್ಟು ಬೇಗ
ಸಾಯಬಾರದಿತ್ತು, ಎಂದೂ ಆತ ಕೆಡಕು ಬಯಸಿದವನಲ್ಲ, ಇಂಥವರು ಇದ್ದಿದ್ರಿಂದಾನೇ
ಮಳೆಬೆಳೆಯೆಲ್ಲ ಆಗುತ್ತಿರುವುದು, ಇಂಥವರು ಸಿಗುವುದು ಲಕ್ಷಕ್ಕೊಬ್ಬರು, ಇನ್ನೂ
ಇದ್ರಿದ್ರೆ ಚೆನ್ನಾಗಿತ್ತು, ಇವನ ಸಾವು ನಿಜಕ್ಕೂ ತುಂಬಲಾರದ ನಷ್ಟ.... ಮುಂತಾದ
ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಅದೇ, ಸಮಾಜದಲ್ಲಿ ಯಾವುದೇ ಛಾಪು ಮೂಡಿಸದೇ
ಸತ್ತರೆ ಅಥವಾ ಸಮಾಜಕ್ಕೆ ಬೇಡದವನಾಗಿ ಸತ್ತಿದ್ದರೆ... ಏನೇನಂತಾರೆ ಅಂತ ನೀವೇ ಊಹಿಸಿ.
ಗೆಳೆಯರೆ, ಸಾವನ್ನು ಕುರಿತ ಕಥೆ ನಿಮಗೆ ಹೇಳಲೇಬೇಕು. ವ್ಯಕ್ತಿಯೊಬ್ಬ ದೇವರಲ್ಲಿ ಹೀಗೆ
ಬೇಡಿಕೊಂಡನಂತೆ. ದೇವ ನಾನು ಸತ್ತಾಗ ನನ್ನ ಸಾವಿಗೆ ದುಃಖಿಸಿ ಅಳುವ ಕೆಲವರಾದರೂ
ಜನರಿರುವಂತೆ ಕರುಣಿಸು ಅಂತ. ಅದಕ್ಕೆ ದೇವರು, ಇದು ನನ್ನಿಂದ ಆಗದ ಕೆಲಸ. ಜನರು
ಮೆಚ್ಚುವಂತೆ ನೀನು ಬದುಕಬೇಕು ಎಂದನಂತೆ...
ಈ ಕಥೆಯೊಳಗೆ ಬದುಕಿನ ಗೂಡಾರ್ಥವೇ ಅಡಗಿದೆಯಲ್ಲವೇ? ಹುಟ್ಟು ಸಾವು ಎನ್ನುವುದು ಯಾವುದೋ
ಶಕ್ತಿಯ ಕ್ಯೆಯಲ್ಲಿದ್ದರೂ ಮಧ್ಯದ ಈ ಬದುಕಿನಲ್ಲಿ ಗುಣವಂತನಾಗುವುದು, ಕೆಡುಕನಾಗುವುದು
ವ್ಯಕ್ತಿಯ ಕ್ಯೆಯಲ್ಲೇ ಇದೆಯಲ್ಲವೇ? ಸಾವಿನೆಡೆಗೆ ಏನಿದೆಯೋ ಯಾರಿಗೂ ತಿಳಿದಿಲ್ಲ.
ನಾವೆಲ್ಲ ಒಳ್ಳೆಯವರಾಗಿ ಸಮಾಜಕ್ಕೆ ಬೇಕಾದವರಾಗಿ ಬದುಕಿದರೆ ಮುಂದೆ ಸ್ವರ್ಗದ ದಾರಿ
ಸಿಗಲೂಬಹುದು.ಸ್ವರ್ಗ ನರಕದ ಪರಿಕಲ್ಪನೆಗೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಬಹುದು. ಆದರೆ,
ಒಬ್ಬ ಒಳ್ಳೆಯ ವ್ಯಕ್ತಿಯ ಸಾವಿಗೆ ಹಲವಾರು ಜನರು ಕಣ್ಣೀರು ಹರಿಸುತ್ತಾರೆಂಬುದು ನಿಜ.
ಬಹುಶಃ ವ್ಯಕ್ತಿಯೊಬ್ಬನ ಸಾರ್ಥಕ ಬದುಕಿಗೆ ಇದೇ ದೊಡ್ಡ ಕೊಡುಗೆ. ಅಲ್ಲವೆ?
ಸಂಗ್ರಹ
ನಯನ ಕುಮಾರಿ
9ಎ ತರಗತಿ
No comments:
Post a Comment