Wednesday, 28 January 2015

               ಅಜ್ಜಿ ಹೇಳಿದ ಕಥೆ

       ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ 3 ಜನ ಮಕ್ಕಳು. ಹಿರಿಯ ರಾಜಕುಮಾರನ ಹೆಸರು ರಾಜೇಂದ್ರ. ಎರಡನೇ ರಾಜಕುಮಾರ ಸೋಮೆಂದ್ರ. ಹಾಗೂ ಮೂರನೇ ರಾಜಕುಮಾರ ದೇವೇಂದ್ರ. ಮೂವರೂ ರಾಜಕುಮಾರರೂ ವಿದ್ಯಾರ್ಜನೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮೇಲೆ ರಾಜನಿಗೆ ಒಂದು ಯೋಚನೆ ಬಂತು. ಮೂರು ಜನ ರಾಜಕುಮಾರರಲ್ಲಿ ಯಾರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಿರ್ಧರಿಸಿದ. ಆ ಯೋಚನೆ ಬಂದ ಕೂಡಲೇ ರಾಜ ಮೂವರೂ ರಾಜಕುಮಾರರನ್ನು ಕರೆಸಿದ. ಅವರೆಲ್ಲರಿಗೆ ಒಂದು ಪ್ರಶ್ನೆ ಹಾಕಿದ . ಅದೇನೆಂದರೆ ರಾಜನನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬ ಪ್ರಶ್ನೆ ಹಾಕಿ ಮಾರನೇ ದಿನ ಉತ್ತರಿಸಲು ಹೇಳಿದ. ಮರುದಿನ ಹಿರಿಯ ರಾಜಕುಮಾರ ರಾಜೇಂದ್ರ ಬಂದು ತಾನು ರಾಜನನ್ನು ನಗ, ನಾಣ್ಯ, ಸಂಪತ್ತು ಎಲ್ಲವುಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಸಂತೋಷವಾಯಿತು. ಎರಡನೇ ರಾಜಕುಮಾರ ಸೋಮೆಂದ್ರ ಬಂದು ತಾನು ರಾಜನನ್ನು ಎಲ್ಲಾ ಸಿಹಿತಿಂಡಿಗಳು ಕಜ್ಜಾಯಗಳಿಗಿಂತ ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಕುಶಿಯಾಯ್ತು. ಮೂರನೇ ರಾಜಕುಮಾರ ದೇವೇಂದ್ರ ಬಂದು ತಾನು ರಾಜನನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ತುಂಬಾ ಕೋಪ ಬಂತು. ತನ್ನನ್ನು ಆ ಕನಿಷ್ಠ ಉಪ್ಪಿಗಿಂತ ಪ್ರೀತಿಸುತ್ತಾನೆಂದು ಹೇಳುತ್ತಾನಲ್ಲ ದೇವೇಂದ್ರ ಎಂದು. ರಾಜ ಕೋಪದಿಂದ ದೇವೇಂದ್ರನಿಗೆ ಬೈದು ತನ್ನನ್ನು ಪ್ರೀತಿಸದ ಮೇಲೆ ತನ್ನ ರಾಜ್ಯ ಸಂಪತ್ತು ಯಾವೂದರಲ್ಲೂ ನಿನಗೆ ಹಕ್ಕಿಲ್ಲ ಎಂದು ಹೇಳಿ ದೇವೇಂದ್ರನನ್ನು ರಾಜ್ಯದಿಂದ ಹೊರಕ್ಕೆ ಹಾಕಿಬಿಟ್ಟ.
           ತಂದೆಯು ತನ್ನನ್ನು ಮನೆಯಿಂದ ಹೊರಹಾಕಿದ್ದಕ್ಕೆ ದೇವೇಂದ್ರ ತುಂಬಾ ನೊಂದುಕೊಂಡ. ಹೀಗೆ ದು:ಖಿಸುತ್ತಾ ಒಂದು ದಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಒಬ್ಬಳು ತುಂಬಾ ವಯಸ್ಸಾದ ಅಜ್ಜಿ ನಡೆಯಲಾರದೇ ಕಷ್ಟ ಪಡುತ್ತಿರುವುದನ್ನು ನೋಡಿದ ದೇವೇಂದ್ರ ಆ ಅಜ್ಜಿಯನ್ನು ಕೈ ಹಿಡಿದು ಆಕೆಯ ಮನೆಯವರೆಗೂ ಆಕೆಗೆ ನಡೆಯಲು ಸಹಾಯ ಮಾಡಿದ. ದೇವೇಂದ್ರನ ಈ ಸಹಾಯದಿಂದ ತುಂಬಾ ಸಂತೋಷಗೊಂಡ ಆ ಅಜ್ಜಿ ದೇವೇಂದ್ರ ನ ಪೂರ್ವಾಪರಗಳನ್ನು ವಿಚಾರಿಸಿದಳು. ದೇವೇಂದ್ರ ನಡೆದ ಕತೆಯನ್ನೆಲ್ಲ ಅಜ್ಜಿಗೆ ವಿವರಿಸಿದ. ಕಥೆಯನ್ನು ಕೇಳಿದ ಅಜ್ಜಿ ದೇವೇಂದ್ರನಿಗೆ ಸಹಾಯ ಮಾಡಲು ನಿರ್ಧರಿಸಿದಳು. ದೇವೇಂದ್ರನನ್ನು ಕರೆದು ಹೀಗೆ ಹೇಳಿದಳು. “ನನಗೆ ಮಾಯಾವಿ ಶಕ್ತಿಯಿದೆ, ಆ ಶಕ್ತಿಯನ್ನು ಬಳಸಿ ನಿನಗೆ ಒಂದು ರಾಜ್ಯ ನಿರ್ಮಿಸಿ ಕೊಡುತ್ತೇನೆ. ನೀನು ಇದೆ ರೀತಿ ಒಳ್ಳೆಯತನದಿಂದ ಆ ರಾಜ್ಯವನ್ನು ಆಳಬೇಕು” ಎಂದು ಆದೇಶಿಸಿದಳು. ಇದಾರಿಂದ ಸಂತೋಷಗೊಂಡ ದೇವೇಂದ್ರ ಆದೇಶವನ್ನು ಶಿರಸಾ ಪಾಲಿಸುತ್ತೇನೆ ಎಂದು ಮಾತು ಕೊಟ್ಟ. ಮಾತಿನಂತೆ ಅಜ್ಜಿ ದೇವೇಂದ್ರನಿಗೆ ಒಂದು ಸುಂದರ ಸಂಪದ್ಭರಿತ ರಾಜ್ಯ ಕಟ್ಟಿ ಕೊಟ್ಟಳು. ಸಂತೋಷಗೊಂಡ ದೇವೇಂದ್ರ ಅಜ್ಜಿಗೆ ಧನ್ಯವಾದ ಹೇಳಿ ತನ್ನ ರಾಜ್ಯಕ್ಕೆ ಹೋಗಿ ದಕ್ಷತೆಯಿಂದ ರಾಜ್ಯಭಾರ ಮಾಡತೊಡಗಿದ.
           ಕೆಲ ಕಾಲದ ನಂತರ ದೇವೇಂದ್ರನಿಗೆ ತನ್ನ ತಂದೆ ತಾಯಿ ಸಹೋದರರನ್ನು ಭೇಟಿಯಾಗುವ ಆಸೆಯಾಯ್ತು. ಆದರೆ ತಂದೆ ಗೆ ತನ್ನ ಮೇಲಿರುವ ಕೋಪ ಇನ್ನೂ ಕಡಿಮೆಯಾಗಿದೆಯೋ ಇಲ್ಲವೋ ಎನ್ನುವ ಆತಂಕ. ಅದಕ್ಕೆ ಅವನು ಒಂದು ಉಪಾಯ ಯೋಚಿಸಿದ. ತನ್ನ ಸುತ್ತ ಮುತ್ತಲಿನ ಎಲ್ಲಾ ರಾಜ್ಯದ ರಾಜರಿಗೆ ಒಂದು ಔತಣಕೂಟ ಏರ್ಪಡಿಸಿದ. ಆ ಔತಣಕೂಟಕ್ಕೆ ದೇವೇಂದ್ರನ ತಂದೆ ತಾಯಿ ಸಹೋದರರನ್ನೂ ಆಮಂತ್ರಿಸಿದ.
             ಔತಣಕೂಕ್ಕೆ ಆಮಂತ್ರಣ ನೀಡಿದ ರಾಜ ಯಾರೆಂದು ತಿಳಿದಿಲ್ಲವಾದರೂ ದೇವೇಂದ್ರನ ತಂದೆ ಪರಿವಾರ ಸಮೇತ ಆಗಮಿಸಿದ. ಎಲ್ಲಾ ರಾಜರೂ ಆಗಮಿಸಿದ ಮೇಲೆ ರಾಜ ಅಂದರೆ ದೇವೇಂದ್ರ ಸಭೆಗ ಆಗಮಿಸದೆ ತನ್ನ ಮಂತ್ರಿಯನ್ನು ಕಳುಹಿಸಿ ಔತಣದ ನಂತರ ರಾಜ ಆಗಮಿಸುತ್ತಾರೆ ಎಂಬ ಸಂದೇಶವನ್ನು ಸಭೆಯಲ್ಲಿ ಘೋಷಿಸಿದ. ಔತಣಕೂಟಕ್ಕೆ ಸಿದ್ದಪಡಿಸಿದ ಎಲ್ಲಾ ತಿನಿಸುಗಳನ್ನು ತಂದು ಸಭೆಯಲ್ಲಿ ಇಟ್ಟರು ವಿಧ ವಿಧ ಕಜ್ಜಾಯಗಳು ತಿಂಡಿ ತಿನಿಸುಗಳು ನೋಡಿದ ತಕ್ಷಣ ಬಾಯಲ್ಲಿ ನೀರೂರುವಂತಿತ್ತು. ಸಭೆಯಲ್ಲಿ ಕುಳಿತಿದ್ದ ರಾಜರುಗಳಿಗೆಲ್ಲಾ ಊಟ ಬಡಿಸಲಾಯ್ತು. ಒಂದೆರಡು ತುತ್ತು ಊಟ ಮಾಡಿ ಎಲ್ಲರೂ ಮುಖ ಮುಖ ನೋಡಿಕೊಳ್ಳಲಾರಂಭಿಸಿದರು. ಯಾಕೆಂದರೆ ಯಾವ ಅಡುಗೆಗೂ ಉಪ್ಪೇ ಹಾಕಿರಲಿಲ್ಲ. ನೋಡಲು ತುಂಬಾ ಸುಂದರವಾಗಿ ಕಂಡ ಆ ಎಲ್ಲಾ ತಿಂಡಿ ತಿನಿಸುಗಳೂ ಸಪ್ಪೆ ಸಪ್ಪೆ. ಉಪ್ಪಿಲ್ಲದ ಆ ಅಡುಗೆ ಸ್ವಲ್ಪವೂ ರುಚಿಕರವಾಗಿರಲಿಲ್ಲ. ಎಲ್ಲರೂ ಉಪ್ಪಿಲ್ಲದ ಆ ಸಪ್ಪೆ ಊಟವನ್ನು ತೆಗಳಲು ಶುರು ಮಾಡಿದರು. ದೇವೇಂದ್ರ ನ ತಂದೆ ಸಹ ಇದೆಂತ ಕೆಟ್ಟ ಊಟ ಎಂದು ಬಯ್ದ. ಆಗ ಸಭೆಗೆ ದೇವೇಂದ್ರ ಆಗಮಿಸಿದ. ಉಪ್ಪಿಲ್ಲದೆ ಊಟ ತಯಾರಿಸಿದುದರ ಕಾರಣ ಘೋಷಿಸಿದ. ತಾನು ತನ್ನ ತಂದೆಯನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದಾಗ ತನ್ನ ತಂದೆ ಉಪ್ಪನ್ನು ತುಂಬಾ ಕನಿಷ್ಠ ವಸ್ತುವೆಂದು ಪರಿಗಣಿಸಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ ವಿಷಯ ತಿಳಿಸಿದ. ಅದಕ್ಕಾಗಿಯೇ ಉಪ್ಪಿನ ಬೆಲೆಯನ್ನು ಎಲ್ಲರಿಗೂ ಮನವರಿಕೆ ಮಾಡಲೆಂದೆ ಉಪ್ಪಿಲ್ಲದ ಅಡುಗೆಯನ್ನು ಎಲ್ಲರಿಗೂ ತಿನಿಸಿದ್ದಾಗಿ ಹೇಳಿದ. ಆಗ ದೇವೇಂದ್ರನ ತಂದೆಗೆ ತಾನು ಮಾಡಿದ ತಪ್ಪಿನ ಅರಿವಾಯ್ತು. ದೇವೇಂದ್ರನಲ್ಲಿ ಕ್ಷಮೆ ಕೇಳಿದ. ದೇವೇಂದ್ರ ಮತ್ತೆ ತನ್ನ ತಂದೆ ತಾಯಿ ಪರಿವಾರದೊಡಗೂಡಿ ಸಂತೋಷವಾಗಿ ಒಳ್ಳೆಯತನದಿಂದ ರಾಜ್ಯಭಾರ ಮಾಡಿದ.
 ನೀತಿ : ಪ್ರತಿಯೊಂದು ವಸ್ತುವಿಗೂ ಅದರದೇ ಆದ ಬೆಲೆ ಇರುತ್ತದೆ. ಯಾವ ವಸ್ತುವನ್ನೂ ಅಥವಾ ಯಾರನ್ನೂ ಕನಿಷ್ಟವೆಂದು ಹೀಗಳೆಯಬಾರದು.
                                                                         ಸಂಗ್ರಹ
                                                                          ರಂಜಿತ್ 
                                                                         8 ಎ ತರಗತಿ

No comments: