ಗುರು
ಯಾವ ರೂಪದಲ್ಲಿ ಬರುತ್ತಾನೋ
ಬಲ್ಲವನಾರು?
ಪ್ರತಿಕ್ಷಣ
ನಾವು ಮಾಡುವ ಆಲೋಚನೆಗಳು, ತೆಗೆದುಕೊಳ್ಳುವ ನಿರ್ಧಾರಗಳು, ಆಯ್ಕೆ ಮಾಡಿಕೊಳ್ಳುವ ದಾರಿ
ನಮ್ಮ ಬದುಕನ್ನು ಮತ್ತು ಅದು ಸಾಗುವ ದಿಕ್ಕನ್ನು ನಿರ್ಧರಿಸುತ್ತವೆ. ಬದುಕು ಒಂದು ರೀತಿ
ಚದುರಂಗದ ಆಟದಂತೆ. ಇಂದು ನಡೆಸುವ ನಮ್ಮ ಒಂದೊಂದು ನಡೆ ನಮ್ಮ ಮುಂದಿನ ಬದುಕನ್ನು
ರೂಪಿಸುತ್ತಾ ಹೋಗುತ್ತದೆ. ಹಾಗಾಗಿ ಪ್ರತಿ ದಿನ ನಾವು ತೆಗೆದುಕೊಳ್ಳುವ ನಿರ್ಧಾರಗಳು,
ಮಾಡಿಕೊಳ್ಳುವ ಆಯ್ಕೆಗಳು, ನಮ್ಮ ಆಲೋಚನೆಯ ದಿಕ್ಕು-ದಸೆಗಳ ಕಡೆ ನಿರಂತರ ಗಮನ ಅಗತ್ಯ.
ನಮಗೆ ಬದುಕಲ್ಲಿ ಸರಿಯಾದ ಆಯ್ಕೆಯನ್ನು, ನಿರ್ಧಾರವನ್ನು ತೆಗೆದುಕೊಳ್ಳಲು ನಮ್ಮಲ್ಲಿ
ಅರಿವನ್ನು ಮೂಡಿಸುವವನೆ ನಮಗೆ ಗುರು.
ಆ ಗುರು ಯಾವ ರೂಪದಲ್ಲಾದರೂ ಬರಬಹುದು. ತಂದೆ, ತಾಯಿ, ಅಕ್ಕ, ಅಣ್ಣ, ಸ್ಕೂಲ್ ಮೇಷ್ಟ್ರು,
ಸ್ನೇಹಿತ, ಗೆಳತಿ... ಹೀಗೆ... ಆ ದಿನ, ಆ ಹುಡುಗನ ಬದುಕಲ್ಲಿ ಗುರು, ತೋಟದ ಮಾಲಿಯ
ರೂಪದಲ್ಲಿ ಬಂದಿದ್ದ. ಆರನೇ ವಯಸ್ಸಿನಲ್ಲೇ ಅವನನ್ನು ಭೇಟಿಯಾಗಿದ್ದು ಅವನ ಅದೃಷ್ಟ.
ನಿಮಗೆ ಆ ಹುಡುಗನ ಆರನೇ ವಯಸ್ಸಿನಲ್ಲಿ ನಡೆದ ಘಟನೆ ಬಗ್ಗೆ ಹೇಳಬೇಕು.
ಎಲ್ಲಾ ಹುಡುಗರಂತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ, ಅವನ ಜೊತೆಯಿದ್ದ ಕೊಂಚ
ದೊಡ್ಡ ವಯಸ್ಸಿನ ಹುಡುಗರು ದಾರಿಯಲ್ಲಿದ್ದ ಮಾವಿನ ತೋಪಿಗೆ ಹೋಗಲು
ಮಾತಾಡಿಕೊಳ್ಳುತ್ತಿದ್ದರು. ಚಿಕ್ಕ ಹುಡುಗರು ಬೇರೆ ರುಚಿಕರ ಮಾವಿನ ಹಣ್ಣಿನ
ಆಸೆ.ಹುಡುಗರಲ್ಲಿ ತಪ್ಪು-ಸರಿಯ ವಿವೇಚನೆಯನ್ನು ಪಕ್ಕಕ್ಕೆ ತಳ್ಳಿತ್ತು. ಸರಿ, ಎಲ್ಲರೂ
ಮಾವಿನ ತೋಪಿಗೆ ನುಗ್ಗಿದರು. ಮರ ಹತ್ತಿ ಕೈಗೆ ಸಿಕ್ಕ ಹಣ್ಣನ್ನು ಕೀಳತೊಡಗಿದರು. ಆ
ಕುಳ್ಳ ಹುಡುಗ ಮಾತ್ರ ಮರದ ಕೆಳಗೆ ನಿಂತು ಮಾವಿನ ಹಣ್ಣಿನ ಆಸೆಯಿಂದ, ಮರ ಹತ್ತಿದ್ದ ಕೊಂಚ
ದೊಡ್ಡ ವಯಸ್ಸಿನ ಹುಡುಗರನ್ನು ಬೆರಗಿನಿಂದ ನೋಡುತ್ತಾ ಅಯೋಮಯ ಸ್ಥಿತಿಯಲ್ಲಿ ನಿಂತಿದ್ದ.
ಆಗ ಓಡಿ ಬಂದ ನೋಡಿ ತೋಟದ ಮಾಲಿ, 'ಯಾರಲ್ಲಿ!' ಎಂದು ಸುಮ್ಮನೆ ಹೂಂಕರಿಸಿ. ಮರ ಹತ್ತಿದ್ದ
ಎಲ್ಲಾ ಪುಂಡು ಹುಡುಗರು ದಡಬಡನೆ ಎದ್ದೆವೋ, ಬಿದ್ದೆವೋ ಎಂಬಂತೆ ತಪ್ಪಿಸಿಕೊಂಡು
ಓಡಿಹೋದರು. ಆದರೆ ಅಯೋಮಯ ಸ್ಥಿತಿಯಲ್ಲಿದ್ದ ಆ ಪುಟ್ಟ ಹುಡುಗ ತೋಟದ ಮಾಲಿಯ ಕೈಯಲ್ಲಿ
ಸಿಕ್ಕಿಬಿದ್ದ. ಕಷ್ಟಪಟ್ಟು ಬೆಳೆದ ಫಲ ಕಳ್ಳತನವಾಗುತ್ತಿತ್ತು, ಜೊತೆಗೆ ಪುಂಡು ಹುಡುಗರ
ಊಡಾಳುತನದಿಂದ ಮಾಲಿ ಮೊದಲೇ ಬೇಸತ್ತಿದ್ದ. ಸಿಕ್ಕಿಬಿದ್ದ ಕುಳ್ಳ ಹುಡುಗನಿಗೆ ಎರಡು
ಬಿಗಿದ. ಜೊತೆಗೆ ಯಥೇಚ್ಛವಾಗಿ ಬೈಯ್ಯತೊಡಗಿದ. ಗಾಬರಿ ಬಿದ್ದ ಹುಡುಗ ಜೋರಾಗಿ ಅಳತೊಡಗಿದ.
ಸೋರುತ್ತಿರುವ ಮೂಗನ್ನು ಏರಿಸುತ್ತಲೇ, ಬಿಕ್ಕುತ್ತಾ ಹುಡುಗ ನುಡಿದ "ನಾನು ಅಪ್ಪ-ಅಮ್ಮ
ಇಲ್ಲದ ಅನಾಥ.. ಅದಕ್ಕೆ ನನಗೆ ಹೊಡೆದು ಬಡೆದು ಬೈತೀರೇನ್ರಿ?" ಅಂದುಬಿಟ್ಟ. ಆ ಕುಳ್ಳ
ಹುಡುಗನ ತಂದೆ-ತಾಯಿ ಅವನು ಚಿಕ್ಕವನಾಗಿದ್ದಾಗಲೇ ತೀರಿಕೊಂಡಿದ್ದರು. ಅವನ ತಾತನ
ಮನೆಯಲ್ಲಿ ಬೆಳೆಯುತ್ತಿದ್ದ. ತೋಟದ ಮಾಲಿ ಕೊಂಚ ಮೆದುವಾದ. ಅವನು ಮಕ್ಕಳನ್ನು ಹೆತ್ತು
ಹೊತ್ತು ಆಡಿಸಿದ ತಂದೆ. ಎಲ್ಲೋ ಕೊಂಚ ಕರುಳು ಚುರುಕ್ಕಂತು. ಕೋಪ ಹಾಗೆ ಆವಿಯಾಯಿತು.
"ಮಗು, ತಂದೆ ತಾಯಿ ಇಲ್ಲದ ನೀನು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕಲ್ಲವೆ?
ತಂದೆ ತಾಯಿ ಇಲ್ಲದವ ಎಂಬುದು ಎಲ್ಲಾ ಪುಂಡಾಟಕ್ಕೆ ನೆಪವಾಗಬಾರದಲ್ಲವೆ? ಹೋಗ್-ಹೋಗು
ಜವಾಬ್ದಾರಿಯಿಂದ ಇರುವುದನ್ನು ಕಲಿ" ಎಂದು ಮನೆಗೆ ಕಳುಹಿಸಿಬಿಟ್ಟ.
ತೋಟದ ಮಾಲಿಯ ಮಾತು ಆರು ವರುಷದ ಚಿಕ್ಕ ಹುಡುಗನ ಮೇಲೆ ಎಂಥಾ ಪ್ರಭಾವ ಬೀರಿತೆಂದರೆ, ಆ
ಹುಡುಗ ಜೀವನ ಪೂರ್ತಿ ಅಳತೆ ತಪ್ಪಿ ನಡೆಯಲಿಲ್ಲ, ಎಂದಿಗೂ ಜವಾಬ್ದಾರಿಯನ್ನು ಮರೆಯಲಿಲ್ಲ.
ಜವಾಬ್ಧಾರಿಯುತ ನಡೆ ನುಡಿಯನ್ನು ಮತ್ತು ಅಂತರಂಗದ ಶುದ್ಧಿಯನ್ನು ತನ್ನ ಜೀವನ ಪೂರ್ತಿ
ವ್ರತದಂತೆ ಆಚರಿಸಿಕೊಂಡು ಬಂದ. ಹೀಗೆ ಹೊಸ ಅರಿವಿಗೆ ಕಣ್ತೆರದ ಹುಡುಗ, ಮುಂದೆ ಭಾರತದ
ಪ್ರಧಾನ ಮಂತ್ರಿಯಾದ, ಭಾರತ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಯಾದ. ಅಂದ ಹಾಗೆ ಆ ಕುಳ್ಳ
ಹುಡುಗನ ಹೆಸರು ಲಾಲ್ ಬಹದ್ಧೂರ್ ಶಾಸ್ತ್ರಿ.ಯುದ್ಧದ ಸಂಕಷ್ಟಕಾಲದಲ್ಲಿ 'ಜೈ ಜವಾನ್ ಜೈ
ಕಿಸಾನ್' ಎಂದು ದೇಶವನ್ನು ಮುನ್ನಡೆಸಿದ ಮಹಾತ್ಮ ಲಾಲ್ ಬಹದ್ಧೂರ್ ಶಾಸ್ತ್ರಿ.
ನಮ್ಮ ಎಲ್ಲಾ ತಪ್ಪು ನಡೆಗೆ, ನಡತೆಗೆ, ಆಲೋಚನೆಗಳಿಗೆ ಕಾರಣವಾಗುವ ನೂನ್ಯತೆಗಳು, ಲೋಪ
ದೋಷಗಳು ನಮ್ಮ ಬದುಕನ್ನು ಮೇಲೆತ್ತುವ ಸ್ಪೂರ್ತಿದಾಯಕ ಶಕ್ತಿ ಆಗಬಲ್ಲದು ಅಲ್ಲವೇ? ಎಲ್ಲಾ
ನ್ಯೂನತೆಯ ಕುಂಟು ನೆಪಗಳನ್ನು ಮೀರುವ, ಬದುಕಿನ ಹೊಸ ಸವಾಲಿಗೆ, ಅರಿವಿಗೆ,
ಜವಾಬ್ದಾರಿಗೆ ತೆರೆದುಕೊಳ್ಳುವ 'ಶುಭಸಂಕಲ್ಪ' ಮಾಡೋಣ. ಆ ಅರಿವನ್ನು ಮೂಡಿಸುವ ಗುರು ಯಾವ
ರೂಪದಲ್ಲಿ ಬಂದರೂ ಸ್ವೀಕರಿಸೋಣ.
ಪದ್ಮಶ್ರೀ ಪಿ. 9 ಎ ತರಗತಿ
No comments:
Post a Comment