ಬಕಾಸುರನ ಸಂತೃಪ್ತಿ
ಒಂದು ಉರಿನಲ್ಲಿ ಒಬ್ಬ ಯುವಕನಿದ್ದ. ಅವನಿಗೆ ಅಗಾಧವಾದ ಹಸಿವಿನ ರೋಗವಿತ್ತು.
ಎಷ್ಟು ತಿಂದರೂ ತೃಪ್ತಿ ಇಲ್ಲ. ತಳವಿಲ್ಲದ ಬಾವಿಯಂತಹ ಹೊಟ್ಟೆ, ಎಷ್ಟು ತಿಂದರೂ ಇಂಗದ
ಹಸಿವು! ಮನೆ ಮದ್ದಾಯಿತು, ಆಲೋಪತಿ, ಹೋಮಿಯೋಪತಿ, ನಾಟಿ ಔಷಧಿ ಎಲ್ಲಾ ಪ್ರಯತ್ನಿಸಿದರು,
ಹಲವು ದೇವರಿಗೆ ಹರಕೆ ಹೊತ್ತರು. ಯಾವುದೂ ಫಲ ನೀಡಲಿಲ್ಲ. ಅವನಿಗೆ ಆಹಾರ ಹೊಂದಿಸುವುದೇ
ಒಂದು ಸಮಸ್ಯೆಯಾಯಿತು. ಕೊನೆಗೆ ಅವನ ತಂದೆ ತಾಯಿ, ಅವನ ಬಂಧು ಬಳಗ ಎಲ್ಲಾ ಕೈ
ಚೆಲ್ಲಿದರು!ಈಗಿನ ಕಾಲದವರಂತಲ್ಲ, ಆಗಿನ ಕಾಲದ ಜನ. ಅವನ ಊರಿನವರು ಯುವಕನ ಕುಟುಂಬಕ್ಕೆ ತುಂಬಾಸಹಾಯ ಮಾಡಿದರು. ಕೊನೆಕೊನೆಗೆ ಇದು ಊರಿನವಗೂ ಸಮಸ್ಯೆಯಾಗತೊಡಗಿತು. ಇಡೀ ಊರಿನಲ್ಲಿ ಆಹಾರದಕೊರತೆ ಕಂಡುಬಂತು. ಊರವರು ಅಸಮಧಾನ ಸೂಚಿಸುವ ಮೊದಲೇ ಅವನ ತಂದೆತಾಯಿ ಅವನನ್ನು ಊರಿಂದ ಹೊರಕಳಿಸುವ ವಿಚಾರ ಮಾಡಿದರು. ಎಲ್ಲೋ ದೂರದ ಆಶಾಭಾವನೆ ಮತ್ತು ಕರುಳಿನ ಸಂಕಟ
ಇಷ್ಟು ದಿನ ಅವರನ್ನು ತಡೆಯುತಿತ್ತು. ಆದರೆ ಆಹಾರದ ಕೊರತೆ ಇಡೀ ಊರನ್ನೇ ವ್ಯಾಪಿಸಿದಾಗ
ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು.
ದೇವರ ದಯೆಯೋ ಅವರ ಪೂರ್ವ ಜನ್ಮದ ಪುಣ್ಯವೋ, ಸಮಯಕ್ಕೆ ಸರಿಯಾಗಿ ಆ ಊರಿಗೆ ಒಬ್ಬ ಸನ್ಯಾಸಿಯ ಅಗಮನವಾಯಿತು. ಅವರ ಸಾಧನೆ ಸಾರ್ಮಥ್ಯದ ಬಗ್ಗೆ, ಅವರಿಗಿರುವ ವಿಶೇಷ ಶಕ್ತಿ
ಬಗ್ಗೆ ಅನೇಕ ದಂತಕತೆಗಳಿದ್ದವು. ಕೊನೆಯ ಪ್ರಯತ್ನವೆಂಬಂತೆ ಯುವಕನ ತಂದೆತಾಯಿ ಸನ್ಯಾಸಿಯ
ಹತ್ತಿರ ಯುವಕನ ಸಮಸ್ಯೆಯನ್ನು ನಿವೇದಿಸಿಕೊಂಡರು. ಸಮಸ್ಯೆಯನ್ನು ಆಲಿಸಿದ ಸನ್ಯಾಸಿ ಸಾವಧಾನದಿಂದ ಹೀಗೆಂದರು: "ಚಿಂತಿಸಬೇಡಿ, ಪರಿಹಾರವಿದೆ!
ಈ ಯುವಕ ಇನ್ನು ಜೀವನ ಪೂರ್ತಿ ಒಬ್ಬನೆ ಕುಳಿತು ತಿನ್ನುವ ಹಾಗಿಲ್ಲ. ಪ್ರತಿಸಾರಿ
ಊಟಕ್ಕೆ ಕುಳಿತಾಗ ನಾಲ್ಕು ಜನರೊಂದಿಗೆ ಹಂಚಿ ತಿನ್ನಬೇಕು. ಈ ನಿಯಮ ತಪ್ಪಿಸಿದರೆ ಮತ್ತೆ
ಅಗಾಧವಾದ ಹಸಿವಿನ ರೋಗಕ್ಕೆ ಬಲಿಯಾಗುವ ಸಾಧ್ಯತೆಯಿದೆ."
ಸನ್ಯಾಸಿ ತೋರಿದ ಪರಿಹಾರದ ಬಗ್ಗೆ ಅನುಮಾನವಿದ್ದರೂ, ವಿಚಿತ್ರವೆನಿಸಿದರೂ, ಕೊನೆ
ಪ್ರಯತ್ನವಾಗಿ ಅವರ ಸಲಹೆಯನ್ನು ಪಾಲಿಸತೊಡಗಿದರು. ಯುವಕನೂ ಸನ್ಯಾಸಿಗಳು ಹೇಳಿದ ಹಾಗೆ
ಮಾಡಲು ತೊಡಗಿದ. ಆಶ್ಚರ್ಯವೆಂಬಂತೆ ಯುವಕನ ಅಗಾಧವಾದ ಹಸಿವಿನ ರೋಗ ಪರಿಹಾರವಾಯಿತು. ಯುವಕ
ಸ್ವಲ್ಪವೇ ತಿಂದರೂ ಸಂತೃಪ್ತಿಯನ್ನು ಅನುಭವಿಸಿದ.
ಊರಿನವರೆಲ್ಲ ಹರ್ಷದಿಂದ ಸನ್ಯಾಸಿಯನ್ನು ಕೊಂಡಾಡಿದರು. ತಮ್ಮ ಆಶೀರ್ವಾದ ವಚನ ಸಭೆಯಲ್ಲಿ
ಸನ್ಯಾಸಿಗಳು ಹೀಗೆ ಹೇಳಿದರು "ಅತಿ ಶ್ರೀಮಂತಿಕೆಯ ಅಥವಾ ಅತಿ ಹಣದಾಹವಿರುವವರು ಕೂಡ ಈ
ಪರಿಹಾರವನ್ನು ಬಳಸಿ ಜೀವನದಲ್ಲಿ ಸಂತೃಪ್ತಿ ಹೊಂದಬಹುದು!".
ಸಂಗ್ರಹ
ತೃಪ್ತಿ 9ಎ ತರಗತಿ
No comments:
Post a Comment